ಮೃಗಾಲಯ ಶಿಕ್ಷಣ
ಝೂ ಕ್ಲಬ್
ಬನ್ನೇರುಘಟ್ಟ ಜೈವಿಕ ಉದ್ಯಾನವನ (ಬಿಬಿಪಿ)ವು ಯುವ ಮನಸ್ಸುಗಳನ್ನು ಪ್ರಕೃತಿ ಹಾಗೂ ವನ್ಯಜೀವಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ವನ್ಯಜೀವಿ ಹಾಗೂ ಪ್ರಕೃತಿ ಸಂರಕ್ಷಣೆಯತ್ತ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಪ್ರೇರೇಪಿಸುವ ಉದ್ದೇಶದಿಂದ ‘ಝೂ ಕ್ಲಬ್’ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮವು ಭಾನುವಾರಗಳಂದು ನಡೆಯುವ 15 ವಾರಗಳ ಅವಧಿಯದ್ದಾಗಿದ್ದು, ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಅಧಿವೇಶನಗಳನ್ನು ನಡೆಸಲಾಗುತ್ತದೆ. ಗರಿಷ್ಠ 60 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಕಾರ್ಯಕ್ರಮವು ಸಿದ್ಧಾಂತ ತರಗತಿಗಳು ಮತ್ತು ಕ್ಷೇತ್ರ ಭೇಟಿಗಳನ್ನು ಒಳಗೊಂಡಿರುತ್ತದೆ.
ಈ ಕಾರ್ಯಕ್ರಮವು ಪ್ರಾಣಿಪಕ್ಷಿಗಳ ನಿರ್ವಹಣೆ, ಇನ್–ಸಿಟು ಮತ್ತು ಎಕ್ಸ್–ಸಿಟು ಸಂರಕ್ಷಣೆ, ಪ್ರಾಣಿ ಆರೈಕೆ, ನಡವಳಿಕೆ ಹಾಗೂ ಕಲ್ಯಾಣ ಸೇರಿದಂತೆ ಪ್ರಮುಖ ವಿಷಯಗಳನ್ನು ಒಳಗೊಂಡಿರುತ್ತದೆ ಇದು ಸದಸ್ಯರಿಗೆ ಕ್ಷೇತ್ರದ ತಜ್ಞರೊಂದಿಗೆ ಸಂವಹನ ನಡೆಸಲು ಮತ್ತು ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ವೃತ್ತಿಜೀವನವನ್ನು ಅನ್ವೇಷಿಸಲು ಅವಕಾಶವನ್ನು ಒದಗಿಸುತ್ತದೆ.
ಆಸಕ್ತ ಅಭ್ಯರ್ಥಿಗಳು ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯವಿರುವ ದಾಖಲೆಗಳು ಮತ್ತು ಝೂ ಕ್ಲಬ್ ಶುಲ್ಕ ಪಾವತಿ ಸೇರಿದಂತೆ ಹೆಚ್ಚಿನ ವಿವರಗಳನ್ನು ಒಳಗೊಂಡ ದೃಢೀಕರಣ ಇಮೇಲ್ ಅನ್ನು ಕಳುಹಿಸಲಾಗುತ್ತದೆ. 60 ವಿದ್ಯಾರ್ಥಿಗಳ ದಾಖಲಾತಿ ಪೂರ್ಣಗೊಂಡ ನಂತರ ನೋಂದಣಿ ಫಾರ್ಮ್ ಮುಚ್ಚಲಾಗುತ್ತದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ
ಕುಮಾರಿ ಅಮಲಾ ಎಮ್ ಅನಿಲ್ – ಶಿಕ್ಷಣ ಅಧಿಕಾರಿ
ಇ ಮೇಲ್: education@bannerughattabiopark.org
ತರಬೇತಿ
ಬನ್ನೇರುಘಟ್ಟ ಜೈವಿಕ ಉದ್ಯಾನವನವು ಪಶುವೈದ್ಯಕೀಯ, ಜೀವ ವಿಜ್ಞಾನ ಹಾಗೂ ಇತರ ಸಂಬಂಧಿತ ಕ್ಷೇತ್ರಗಳ ವಿದ್ಯಾರ್ಥಿಗಳಿಗಾಗಿ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮವು ಕೆಲಸ ಆಧಾರಿತ ಕಲಿಕೆಯ ಮೂಲಕ ಪ್ರಾಯೋಗಿಕ ಅನುಭವವನ್ನು ಪಡೆಯಲು ಅವಕಾಶವನ್ನು ಒದಗಿಸುತ್ತದೆ. ಇಂಟರ್ನ್‌ಶಿಪ್ ಅವಧಿಯಲ್ಲಿ, ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳು ಮತ್ತು ಯೋಜನೆಗಳಲ್ಲಿ ಭಾಗವಹಿಸುವುದರೊಂದಿಗೆ, ಉದ್ಯಾನವನದ ಕಾರ್ಯವೈಖರಿ ಹಾಗೂ ಬಾಹ್ಯ ಸಂರಕ್ಷಣೆಯ ಮಹತ್ವದ ಕುರಿತು ಆಳವಾದ ಅರಿವು ಪಡೆಯುತ್ತಾರೆ.
ಈ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳು ಸಂಸ್ಥೆಯ ಧ್ಯೇಯವನ್ನು ಮುಂದುವರಿಸಲು ತಮ್ಮ ಕೌಶಲ್ಯಗಳು ಮತ್ತು ಜ್ಞಾನವನ್ನು ಕೊಡುಗೆ ನೀಡುವ ಅವಕಾಶವನ್ನು ಹೊಂದಿರುತ್ತಾರೆ. ಜೊತೆಗೆ, ಈ ಅನುಭವಾಧಾರಿತ ಕಲಿಕೆಯ ಮೂಲಕ ಅವರು ತಮ್ಮ ಭವಿಷ್ಯದ ವೃತ್ತಿಜೀವನಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.
ವನ್ಯಜೀವಿ ಜಾಗ್ರತಿ ಕಾರ್ಯಕ್ರಮ
ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಉತ್ತೇಜಿಸಲು ಬನ್ನೇರುಘಟ್ಟ ಜೈವಿಕ ಉದ್ಯಾನವನವು ಶಾಲಾ ವಿದ್ಯಾರ್ಥಿಗಳಿಗಾಗಿ "ವನ್ಯಜೀವಿ ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮಗಳನ್ನು" ನಡೆಸುತ್ತಿದೆ.
ಮತ್ತಷ್ಟು ಓದು
ಐಎಫ್‌ಎಸ್ ಮತ್ತು ಇತರ ಅರಣ್ಯ ಇಲಾಖೆಯ ಪ್ರೊಬೇಷನರ್ಸ್ ತರಬೇತಿ
ಭಾರತೀಯ ಅರಣ್ಯ ಸೇವೆಯ ಪ್ರೊಬೆಷನರಿ ಅಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳು ತಮ್ಮ ತರಬೇತಿ ವೇಳಾಪಟ್ಟಿಯ ಭಾಗವಾಗಿ ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ. ಆಂತರಿಕ ಸಂಪನ್ಮೂಲ ವ್ಯಕ್ತಿಗಳ ಮೂಲಕ ಅವರಿಗೆ ಉದ್ಯಾನವನದ ಕಾರ್ಯವೈಖರಿ, ನಿರ್ವಹಣೆ, ಇಲ್ಲಿ ಸಂರಕ್ಷಿಸಲಾದ ಪ್ರಾಣಿಪಕ್ಷಿಗಳ ಹಾಗೂ ವಿವಿಧ ಸಂರಕ್ಷಣಾ ವಿಷಯಗಳ ಕುರಿತು ಸಮಗ್ರ ಒಳನೋಟವನ್ನು ನೀಡಲಾಗುತ್ತದೆ.
ಸಂಕೇತ ಫಲಕಗಳು
ಮೃಗಾಲಯದ ಧ್ಯೇಯದಲ್ಲಿ ಶಿಕ್ಷಣವು ಪ್ರಮುಖ ಸ್ಥಾನವನ್ನು ಹೊಂದಿರುವುದರಿಂದ, ಉದ್ಯಾನವನದಲ್ಲಿ ನೆಲೆಗೊಂಡಿರುವ ವಿವಿಧ ಪ್ರಾಣಿ–ಪಕ್ಷಿ ಪ್ರಭೇದಗಳು ಹಾಗೂ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪರಿಸರ ಮಹತ್ವದ ಕುರಿತು ಸಂದರ್ಶಕರಿಗೆ ಒಳನೋಟವನ್ನು ನೀಡುವ ಉದ್ದೇಶದಿಂದ ಸಂಬಂಧಿತ ಸ್ಥಳಗಳಲ್ಲಿ ವಿವಿಧ ಪ್ರದರ್ಶನ ಫಲಕಗಳು ಮತ್ತು ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ.
ಹೆಚ್ಚುವರಿಯಾಗಿ, ಉದ್ಯಾನವನದ ಯೋಜನೆಯನ್ನು ಸ್ಪಷ್ಟಗೊಳಿಸಿ ಮತ್ತು ಅದರ ಸುತ್ತಲೂ ಸಂದರ್ಶಕರ ಸಂಚಾರವನ್ನು ಸುಗಮಗೊಳಿಸಲು ದಿಕ್ಕು ಸೂಚಕ, ಮಾರ್ಗದರ್ಶಕ ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸಿ ನಿಯಮಿತವಾಗಿ ನವೀಕರಿಸಲಾಗುತ್ತದೆ. ಪ್ರಾಣಿಗಳ ಕಲ್ಯಾಣ ಮತ್ತು ಆವರಣಗಳ ಸ್ವಚ್ಛತೆ ಮೇಲೆ ಸಂದರ್ಶಕರ ಅಸಮಂಜಸ ನಡವಳಿಕೆಯಿಂದ ಯಾವುದೇ ಪರಿಣಾಮ ಬಾರದಂತೆ ನೋಡಿಕೊಳ್ಳುವ ಸಲುವಾಗಿ ಉದ್ಯಾನವನದ ನಿಯಮಗಳು ಮತ್ತು ನಿಬಂಧನೆಗಳನ್ನು ಕೂಡ ಸ್ಪಷ್ಟವಾಗಿ ಪ್ರದರ್ಶಿಸಲಾಗಿದೆ.
ಮತ್ತಷ್ಟು ಓದು
ವಸ್ತು ಸಂಗ್ರಹಾಲಯ
ವಸ್ತುಸಂಗ್ರಹಾಲಯವು ಪ್ರಾಣಿಗಳ ಟ್ರೋಫಿಗಳು, ಅಸ್ಥಿಪಂಜರಗಳು, ಛಾಯಾಚಿತ್ರಗಳು ಹಾಗೂ ಪಳೆಯುಳಿಕೆಗಳ ವೈವಿಧ್ಯಮಯ ಮತ್ತು ಮೌಲ್ಯಯುತ ಸಂಗ್ರಹವನ್ನು ಪ್ರದರ್ಶಿಸುತ್ತಿದ್ದು, ಪ್ರತಿಯೊಂದು ಪ್ರದರ್ಶನವೂ ಉನ್ನತ ಶೈಕ್ಷಣಿಕ ಮಹತ್ವವನ್ನು ಹೊಂದಿದೆ. ಈ ಪ್ರದರ್ಶನಗಳ ಮೂಲಕ ಸಂದರ್ಶಕರು ವಿವಿಧ ಪ್ರಾಣಿ–ಪಕ್ಷಿ ಪ್ರಭೇದಗಳ ಅಂಗರಚನಾಶಾಸ್ತ್ರ, ವಿಕಸನ ಕ್ರಮ ಹಾಗೂ ರೂಪಾಂತರಗಳ ಬಗ್ಗೆ ಆಳವಾದ ಅರಿವು ಪಡೆಯಬಹುದು.
ಸಂರಕ್ಷಿತ ಅಸ್ಥಿಪಂಜರಗಳ ರಚನೆಗಳಿಂದ ಹಿಡಿದು ಭೂಮಿಯ ಮೇಲಿನ ಜೀವಿಗಳ ಇತಿಹಾಸವನ್ನು ಅನಾವರಣಗೊಳಿಸುವ ಪಳೆಯುಳಿಕೆಗಳವರೆಗೆ, ಈ ಪ್ರದರ್ಶನಗಳು ಜೀವಂತ ತರಗತಿಯಂತೆ ಕಾರ್ಯನಿರ್ವಹಿಸುತ್ತವೆ. ಜೊತೆಗೆ, ಛಾಯಾಚಿತ್ರಗಳು ಮತ್ತು ಟ್ರೋಫಿಗಳು ವನ್ಯಜೀವಿಗಳ ವೈವಿಧ್ಯತೆಯನ್ನು ಮತ್ತಷ್ಟು ಸ್ಪಷ್ಟಪಡಿಸಿ, ಸಂದರ್ಶಕರು ಸಂರಕ್ಷಣೆಯ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಮೆಚ್ಚುವಂತೆ ಮಾಡುವಲ್ಲಿ ಸಹಕಾರಿಯಾಗುತ್ತವೆ.
